ಊರೆಗಳು ಬಂಧನಗಳು
	ಯಂತ್ರೋತ್ಪಾದನೆಯ ಕಾರ್ಯವಿಧಾನದಲ್ಲಿ ಬಿಡಿಭಾಗಗಳನ್ನು ಉತ್ಪಾದಿಸುವಾಗ ಉಪಕರಣಗಳ ಬಳಕೆಯನ್ನು ನಿಯೋಜಿಸಲು ಬಳಸುವ ಸಾಧನಗಳು (ಜಿಗ್ಸ್ ಅಂಡ್ ಫಿಕ್ಸ್‍ಚರ್ಸ್) ರೂಪಿಸಬೇಕಾದ ಯಂತ್ರ ಭಾಗಗಳನ್ನು ನಿರ್ದಿಷ್ಟಸ್ಥಾನದಲ್ಲಿರಿಸಿ ಕತ್ತರಿಸುವ ಸಾಧನಗಳನ್ನು (ಕಟಿಂಗ್ ಟೂಲ್ಸ್) ಸರಿಯಾಗಿ ನಿರ್ದೇಶಿಸುವುದು ಊರೆಗಳ ಕೆಲಸ. ಇವುಗಳಲ್ಲಿ ಬುಷಿಂಗ್ ಎಂಬ ಸಾಧನ ಉಪಕರಣಗಳನ್ನು ಸರಿಯಾಗಿ ನಿರ್ದೇಶಿಸುತ್ತದೆ. ಕೊರೆಯುವ (ಬೋರಿಂಗ್) ನಯಮಾಡುವ (ಮಿಲ್ಲಿಂಗ್) ಮುಂತಾದ ಕೆಲಸಗಳಲ್ಲೂ ಇದರ ಬಳಕೆ ಇದೆ. ರೂಪಿಸಬೇಕಾದ ಯಂತ್ರಭಾಗಗಳನ್ನು ಸರಿಯಾದ ಸ್ಥಾನದಲ್ಲಿರಿಸಿ ಯಂತ್ರ ಕ್ರಿಯೆಗೆ (ಮೆಷಿನಿಂಗ್) ಅನುಗೊಳಿಸುವುದು ಬಂಧನಗಳ ಕೆಲಸ. ಕೊಯ್ಯುವ ಸಾಧನಗಳನ್ನು ಬಂಧನ ನಿರ್ದೇಶಿಸದು, ಆದರೆ ಸಾಣೆಹಿಡಿಯುವ (ಗ್ರೈಡಿಂಗ್) ಮತ್ತು ಬೆಸುಗೆಹಾಕುವ (ವೆಲ್ಡಿಂಗ್) ಕೆಲಸಗಳಲ್ಲಿ ಇವುಗಳ ಉಪಯೋಗ ಉಂಟು. ರೂಪಿಸುವ ಯಂತ್ರಭಾಗಗಳನ್ನು ಮೊದಲಬಾರಿ ಮತ್ತು ಅನುಕ್ರಮವಾಗಿ ಊರೆ ಅಥವಾ ಬಂಧನಗಳಲ್ಲಿ ಇರಿಸುವುದರ ಮೇಲೆ, ಊರೆ ಅಥವಾ ಬಂಧನಗಳ ನಿಷ್ಕøಷ್ಟತೆ (ಆಕ್ಯುರೆಸಿ) ಅವಲಂಬಿಸಿದೆ. ಕಾರ್ಯವಿಧಾನದ ವಿವಿಧ ಹಂತಗಳಲ್ಲಿ ಮೊದಲನೆಯ ಊರೆ ಅಥವಾ ಬಂಧನ ಯಂತ್ರಭಾಗದ ಮೇಲೆ ಗುರುತಿನ ಬಿಂದುವನ್ನು (ಲೊಕೇಟಿಂಗ್ ಪಾಯಿಂಟ್) ಗುರುತಿಸುತ್ತದೆ. ಈ ಬಿಂದು ಒಂದು ತೂತಾಗಿರಬಹುದು ಅಥವಾ ಕಾರ್ಯ ವಿಧಾನಕ್ಕನುಗುಣವಾಗಿ ಇನ್ನಾವುದೇ ಆಕೃತಿಯಾಗಿರಬಹುದು. ಇದನ್ನೇ ಆಮೇಲೆ ಅನುಕ್ರಮವಾಗಿ ಬರುವ ಊರೆ ಮತ್ತು ಬಂಧನಗಳಲ್ಲಿ ಬಳಸಲಾಗುವುದು.
(ಎಂ.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ